Telegram Join My Telegram   WhatsApp Join My WhatsApp

IPL 2026 RCB vs SRH: ಕೇವಲ 15.4 ಓವರ್‌ಗಳಲ್ಲಿ 202 ರನ್ ಚೇಸ್! ಹೈದರಾಬಾದ್ ವಿರುದ್ಧ ಆರ್​ಸಿಬಿಯ ಐತಿಹಾಸಿಕ ಜಯ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿಯು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯೊಂದಿಗೆ ಶುರುವಾಗಿದೆ. ತವರಿನ ಅಂಗಳವಾದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬಗ್ಗುಬಡಿದಿದೆ. ಕೇವಲ 15.4 ಓವರ್‌ಗಳಲ್ಲಿ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಲ್ಲದೆ ಹೊಸ ದಾಖಲೆಯನ್ನೂ ಬರೆದಿದೆ.

ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಹೈದರಾಬಾದ್

​ಈ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.

​ಹೈದರಾಬಾದ್ ಪರ ನಾಯಕ ಇಶಾನ್ ಕಿಶನ್ ಅತ್ಯದ್ಭುತ ಫಾರ್ಮ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಕಿಶನ್, ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 80 ರನ್ ಸಿಡಿಸಿ ಸ್ಪೋಟಕ ಇನ್ನಿಂಗ್ಸ್ ಆಡಿದರು. ಇವರಿಗೆ ಸಾಥ್ ನೀಡಿದ ಹೆನ್ರಿಕ್ ಕ್ಲಾಸೆನ್ 31 ರನ್ ಗಳಿಸಿದರೆ, ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಅನಿಕೇತ್ ವರ್ಮಾ ಕೇವಲ 18 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೆ ಮಿಂಚಿದ ಆರ್​ಸಿಬಿ ಬೌಲಿಂಗ್ ಪಡೆ

​ಬೃಹತ್ ಮೊತ್ತದ ನಡುವೆಯೂ ಆರ್‌ಸಿಬಿ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿದರು. ಪ್ರಮುಖವಾಗಿ ಜಾಕೋಬ್ ಡಫಿ ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 22 ರನ್‌ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಹೈದರಾಬಾದ್ ಓಟಕ್ಕೆ ಬ್ರೇಕ್ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ರೊಮೆರೊ ಶೆಫರ್ಡ್ ಕೂಡ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಅಭಿನಂದನ್, ಭುವನೇಶ್ವರ್ ಹಾಗೂ ಸುಯೇಶ್ ಶರ್ಮಾ ತಲಾ 1 ವಿಕೆಟ್ ಪಡೆದು ತಂಡಕ್ಕೆ ನೆರವಾದರು.

ಗುರಿ ಬೆನ್ನಟ್ಟಿದ ಆರ್‌ಸಿಬಿ: ಪಡಿಕ್ಕಲ್ ಸುಂಟರಗಾಳಿ

​202 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಫಿಲ್ ಸಾಲ್ಟ್ ಕೇವಲ 9 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಆದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.

​ಬಂದ ತಕ್ಷಣವೇ ಹೈದರಾಬಾದ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಡಿಕ್ಕಲ್, ಕೇವಲ 21 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕ ಪೂರೈಸಿದರು. ಅಂತಿಮವಾಗಿ 26 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ 61 ರನ್ ಗಳಿಸಿ ಔಟಾದರು. ಅವರ ಈ ಸ್ಪೋಟಕ ಆಟ ಆರ್‌ಸಿಬಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಕಿಂಗ್ ಕೊಹ್ಲಿಯ ಅಜೇಯ ಆಟ ಮತ್ತು ದಾಖಲೆಯ ಗೆಲುವು

​ಪಡಿಕ್ಕಲ್ ಔಟಾಗುವ ಮುನ್ನ ವಿರಾಟ್ ಕೊಹ್ಲಿ ಜೊತೆಗೂಡಿ ಎರಡನೇ ವಿಕೆಟ್‌ಗೆ ಅದ್ಭುತ ಶತಕದ ಜೊತೆಯಾಟವಾಡಿದರು. ಪಡಿಕ್ಕಲ್ ನಿರ್ಗಮನದ ನಂತರ ಜವಾಬ್ದಾರಿ ಹೊತ್ತ ಕಿಂಗ್ ಕೊಹ್ಲಿ, ತಮ್ಮ ನೈಜ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದರು. 38 ಎಸೆತಗಳನ್ನು ಎದುರಿಸಿದ ಕೊಹ್ಲಿ, 5 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 69 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

​ಇನ್ನೊಂದೆಡೆ ನಾಯಕ ರಜತ್ ಪಟಿದಾರ್ ಕೂಡ 12 ಎಸೆತಗಳಲ್ಲಿ 31 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿ ತಂಡದ ಗೆಲುವನ್ನು ತ್ವರಿತಗೊಳಿಸಿದರು. ಪರಿಣಾಮವಾಗಿ, ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 202 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ: ಈ ಗೆಲುವಿನೊಂದಿಗೆ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಟೂರ್ನಿಯಲ್ಲಿ ಎಸ್‌ಆರ್‌ಹೆಚ್ ವಿರುದ್ಧ 190+ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ನಿದರ್ಶನ ಇದಾಗಿದೆ. ಅಲ್ಲದೆ, ಇಷ್ಟು ವೇಗವಾಗಿ (15.4 ಓವರ್‌ಗಳಲ್ಲಿ) 200ಕ್ಕೂ ಹೆಚ್ಚು ರನ್ ಚೇಸ್ ಮಾಡಿರುವುದು ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ಗೆ ಸಾಕ್ಷಿಯಾಗಿದೆ.

Leave a Comment